ಆತ್ಮನಾಶ
ದೇಹವೇ ಆತ್ಮವೆಂದು ನಂಬುವವರು ಮರಣ ಸಮಯದಲ್ಲಿ ಆತ್ಮನಾಶವಾಗುತ್ತದೆಂದು ನಂಬುತ್ತಾರೆ. ಮರಣಾನಂತರದ ಸ್ಥಿತಿಗತಿಗಳು ನಿಖರವಾಗಿ ತಿಳಿಯದೆ ಇರುವುದೂ ದೃಗ್ಗೋಚರವಾಗದೆ ಇರುವುದೂ ಇಲ್ಲವೇ ಇಲ್ಲವೆಂದು ಬಗೆಯುವುದೂ ಸಹಜವೇ. ಆತ್ಮ ನಿತ್ಯ, ಅವಿನಾಶಿ ಎನ್ನುವುದು ಪಾಶ್ಚಾತ್ಯರಲ್ಲೂ ಪೌರಸ್ತ್ಯರಲ್ಲೂ ಪ್ರಾಚೀನಕಾಲದಿಂದಲೂ ದೃಢವಾಗಿ ನಿಂತಿರುವ ಕಲ್ಪನೆಯಾದರೂ ಅದನ್ನು ನಿರಾಕರಿಸುವ ಪಕ್ಷಗಳೂ ಇಲ್ಲವೆ ಇಲ್ಲ. ಮರಣಾನಂತರದ ಸ್ಥಿತಿ ಲೌಕಿಕ ವ್ಯವಹಾರಗಳಿಗೆ ಉಪಯುಕ್ತವಾದುದಲ್ಲವೆಂಬ ಕಾರಣದಿಂದ ಆತ್ಮದ ಶಾಶ್ವತತೆಯ ಬಗ್ಗೆ ವಿಚಾರಮಾಡಲು ಇವರು ಒಪ್ಪುವುದಿಲ್ಲ. ನಮ್ಮಲ್ಲಿ ಚಾರ್ವಾಕರ `ಭಸ್ಮೀ ಭೂತಸ್ಯ ದೇಹಸ್ಯ ಪುನರಾಗಮನಂ ಕುತಃ' ಎನ್ನುವ ನಿಲುವು ಪ್ರಸಿದ್ಧವಾಗಿದೆ. ಪಾಶ್ಚಾತ್ಯರಲ್ಲಿ ಆತ್ಮ ಸಂಕೀರ್ಣ ಸ್ವಭಾವದ್ದೆಂದೂ ಅದು ಕ್ರಮೇಣ ಶಿಥಿಲವಾಗಿ ನಾಶ ಹೊಂದುವುದೆಂದೂ ನಂಬುವ ಜನರಿದ್ದರು. ಇವರಲ್ಲಿ ಪ್ರಮುಖರಾದವರು ಪ್ರಯೋಜನವಾದಿಗಳು (ಯುಟಿಲಿಟೇರಿಯನ್ಸ್). ಬೈಬಲ್ಲಿನ ಹಳೆಯ ಒಡಂಬಡಿಕೆಯ ಅಲ್ಲಲ್ಲಿ ಇದೇ ವಾದದ ಛಾಯೆಯನ್ನು ಕಾಣಬಹುದು. ಇರುವ ಯಾವುದೂ ಆದ್ಯಂತಿಕವಾಗಿ ಧ್ವಂಸವಾಗುವುದು ಸಾಧ್ಯವಿಲ್ಲ ಎನ್ನುವ ವಾದವನ್ನು ಸಂತ ಥಾಮಸ್ ಅಕ್ವಿನಾಸ್ (ನೋಡಿ- ಅಕ್ವಿನಸ್,-ಸೇಂಟ್-ಥಾಮಸ್) ಮುಂದಿಟ್ಟನಾದರೂ ಭಗವಂತ ತನ್ನ ಸೃಷ್ಟಿಯನ್ನೆಲ್ಲ ಸಂಪೂರ್ಣವಾಗಿ ನಾಶ ಮಾಡಲು ಸಮರ್ಥನೆಂದು ಸೂಚಿಸಿದ. ದೇವರ ಕಾರುಣ್ಯವೇ ಜಗತ್ತಿನಲ್ಲಿ ಸೃಷ್ಟಿಯಾದ ವಸ್ತುಗಳು ಉಳಿಯುವಂತೆ ಮಾಡುವುದು ಎಂದು ಅವನ ವಾದ. ಸ್ಪಿನೋಜ ಎಂಬ ದಾರ್ಶನಿಕ ಆತ್ಮ ಶರೀರದ ಕಲ್ಪನೆ (ಐಡಿಯ), ಆದುದರಿಂದ ಮರಣದ ವೇಳೆಯಲ್ಲಿ ಆತ್ಮ ಶರೀರದೊಂದಿಗೆ ಸೇರಿ ನಷ್ಟವಾಗಬಹುದೆಂದು ಸೂಚಿಸಿದ. ಹಾಬ್ಸ್, ಲಾಕ್ ಇವರೂ ಆತ್ಮ ನಿತ್ಯವೆಂದು ಒಪ್ಪಿಕೊಳ್ಳಲಿಲ್ಲ. ಜಗತ್ತಿನಲ್ಲಿ ಪಾಪ ಅನಿವಾರ್ಯವಾದರೆ, ಆತ್ಮದ ನಾಶವೂ ಸ್ವತ ಸಿದ್ಧವಾದುದು ಎನ್ನುವ ವಾದವೂ ಅಲ್ಲಲ್ಲಿ ಬೆಳೆಯತೊಡಗಿತು.
	(ನೋಡಿ- ನಿರ್ವಾಣ)								
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ